ಸುಮಿತ್ ಆಂಟಿಲ್ (ಜನನ 6 ಜುಲೈ 1998) ಅವರು ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ಜಾವೆಲಿನ್ ಎಸೆತಗಾರ . ಅವರು 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಜಾವೆಲಿನ್ ಥ್ರೋ F64 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ಪ್ಯಾರಾಲಿಂಪಿಕ್ ಫೈನಲ್‌ನಲ್ಲಿ 68.55 ಮೀಟರ್‌ಗಳನ್ನು ಎಸೆದಿದ್ದು, ಪ್ರಸ್ತುತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. == ಆರಂಭಿಕ ಜೀವನ == ಸುಮಿತ್ ಆಂಟಿಲ್ ಅವರು 6 ಜುಲೈ 1998 ರಂದು ಭಾರತದ ಹರಿಯಾಣದ ಸೋನಿಪತ್‌ನ ಖೇವ್ರಾದಲ್ಲಿ ಜನಿಸಿದರು. ಯುವಕ ಸುಮಿತ್ ಕುಸ್ತಿಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮತ್ತು ಭಾರತೀಯ ಸೇನೆಗೆ ಸೇರಲು ಬಯಸಿದ್ದರು. 2015 ರಲ್ಲಿ, ಅವರು 17 ವರ್ಷದವರಾಗಿದ್ದಾಗ, ತರಬೇತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್ ಅವರ ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಎಡಗಾಲು ತುಂಡಾಗಿ ಕುಸ್ತಿಪಟು ಆಗುವ ಕನಸನ್ನು ಕೈಬಿಡಬೇಕಾಯಿತು. ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಗೋಸ್ಪೋರ್ಟ್ಸ್ ಫೌಂಡೇಶನ್ ನಿಂದ ಸುಮಿತ್‌ರವರರಿಗೆ ಬೆಂಬಲ ದೊರಕಿತು. ಸೋನಿಪತ್‌ನ ದೇವ್ ರಿಷಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ರಾಮ್‌ಜಾಸ್ ಕಾಲೇಜಿನಿಂದ ಬಿ.ಕಾಂ ಮಾಡುತ್ತಿರುವಾಗ , ಆಂಟಿಲ್‌ನನ್ನು ಇನ್ನೊಬ್ಬ ಪ್ಯಾರಾ ಅಥ್ಲೀಟ್ ರಾಜ್‌ಕುಮಾರ್ ಅವರಿಗೆ ಪರಿಚಯಿಸಿದರು, . 2017 ರಲ್ಲಿ, ಆಂಟಿಲ್ ದೆಹಲಿಯಲ್ಲಿ ನಿತಿನ್ ಜೈಸ್ವಾಲ್ ಅವರಿಂದ ತರಬೇತಿಯನ್ನು ಪ್ರಾರಂಭಿಸಿ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸ್ಪರ್ಧಿಸಿದರು. ಅವರು ರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಜಾವೆಲಿನ್‌ನಲ್ಲಿ ಸ್ಪರ್ಧಿಸಲು ಪ್ರಾರಂಭಿಸಿದರು ಮತ್ತು ಗೋಸ್ಪೋರ್ಟ್ಸ್ ಅವರನ್ನು 2019 ರಲ್ಲಿ ಪ್ಯಾರಾ ಚಾಂಪಿಯನ್ಸ್ ಪ್ರೋಗ್ರಾಂಗೆ ಸೇರಿಸಿತು. == ವೃತ್ತಿ == 2019 ರಲ್ಲಿ, ಇಟಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ, ಅವರು ಕಂಬೈನ್ಡ್ ಈವೆಂಟ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮಾರ್ಗದಲ್ಲಿ F64 ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು. ನಂತರ ಅವರು ದುಬೈ, 2019 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು ಮತ್ತು ಈ ಪ್ರಕ್ರಿಯೆಯಲ್ಲಿ F64 ವಿಭಾಗದಲ್ಲಿ ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದರು. 30 ಆಗಸ್ಟ್ 2021 ರಂದು, ಆಂಟಿಲ್ 2020 ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ F64 ನಲ್ಲಿ ವಿಶ್ವ ದಾಖಲೆಯ 68.55 ಮೀ ಎಸೆತದೊಂದಿಗೆ ಚಿನ್ನದ ಪದಕವನ್ನು ಗೆದ್ದರು. == ಕುಟುಂಬ == ಸುಮಿತ್ ಅಂತಿಲ್ ಅವರ ಕುಟುಂಬವು ಅವರ ತಾಯಿ ನಿರಾಮಲಾ ದೇವಿ ಮತ್ತು ಮೂವರು ಸಹೋದರಿಯರಾದ ಕಿರಣ್, ಸುಶೀಲಾ ಮತ್ತು ರೇಣು ಅವರನ್ನು ಒಳಗೊಂಡಿದೆ. ಅವರ ತಂದೆ ರಾಮ್ ಕುಮಾರ್ ಅವರು ಏಳು ವರ್ಷದವರಾಗಿದ್ದಾಗ ನಿಧನರಾದರು. == ಪ್ರಶಸ್ತಿಗಳು == 2021 - ಖೇಲ್ ರತ್ನ ಪ್ರಶಸ್ತಿ, ಭಾರತದ ಅತ್ಯುನ್ನತ ಕ್ರೀಡಾ ಗೌರವ. 2022 - ಪದ್ಮಶ್ರೀ ಪ್ರಶಸ್ತಿ, ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. == ಸಹ ನೋಡಿ == ಭಾರತದಲ್ಲಿ ಅಥ್ಲೆಟಿಕ್ಸ್ 2020 ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ == ಉಲ್ಲೇಖಗಳು ==